Dhanurmasa Puja from Dec 16, 2021 to Jan 14, 2022

🌹ಶ್ರೀ ಮಂಗಳಾದೇವಿ ಅಮ್ಮನಿಗೆ ಧನುರ್ಮಾಸ ಪೂಜಾ ವೈಭವ.🌹
 
✨ ದಶಂಬರ ೧೬’ ಗುರುವಾರ ೨೦೨೧ – ಜನವರಿ ೧೪’ ಶುಕ್ರವಾರ ೨೦೨೨✨
 
ಇಷ್ಟಾರ್ಥ ಸಿದ್ಧಿಯ ಧನುರ್ಮಾಸವು ಮಗದೊಮ್ಮೆ ಉಲ್ಲಾಸದಿ ಸಮಾಗಮನವಾಗಿದೆ. ಒಂದು ತಿಂಗಳ ಕಾಲ ಅವಿಚ್ಛಿನ್ನವಾಗಿ ಪ್ರತಿದಿನವೂ ಪ್ರಾತಃಕಾಲ ಸೂರ್ಯೋದಯಕ್ಕೂ ಮುಂಚಿತವಾಗಿ ಮಹಾದೇವಿಯನ್ನು ಮಹಾಪೂಜೆಯೊಂದಿಗೆ ಸಂತೃಪ್ತೀಕರಿಸಿ ಅವಳ ಅನುಗ್ರಹವನ್ನು ಪಡೆದು ಜೀವನವನ್ನು ಪಾವನಗೊಳಿಸುವ ವಿಶಿಷ್ಟ ಮಾಸ – ಧನುರ್ಮಾಸವು ನಾಳಿನ ಗುರುವಾರದಿಂದ ಪ್ರಾರಂಭವಾಗಲಿದೆ._
 
ಮಾರ್ಗಶಿರಕ್ಕೆ ಆಗ್ರ-ಹಾಯಣ ಎನ್ನುತ್ತಾರೆ. ಹಾಯಣ ಎಂದರೆ ಮಾಸ. ಆಗ್ರ ಎಂದರೆ ಮೊದಲನೆಯದು. ಸಮೃದ್ಧಿ ಸಂತೃಪ್ತಿ ಸೌಂದರ್ಯ, ಸುಭಗತೆಗಳೇ ಪರಮಾತ್ಮಸೃಷ್ಠಿಯ ವಿಶಿಷ್ಟ ಲಕ್ಷಣವೆಂಬತೆ “ಮಾಸಾನಾಂ ಮಾರ್ಗಶೀರ್ಷೋಸ್ಮಿ”ಎಂದು ಋತ-ಸತ್ಯಗಳ ಸಾಕಾರರೂಪಿಯಾದ ಶ್ರೀಕೃಷ್ಣ ಪರಮಾತ್ಮನು ಮಾರ್ಗಶಿರ ಮಾಸವೆಂದರೆ ತಾನು ಎಂದು ಸಾರಿ ಹೇಳಿದ್ದಾನೆ.
 
ಇದೇ ಮಾರ್ಗಶಿರದಲ್ಲಿ ಧನುರ್ಮಾಸವು ಹರ್ಷೋಲ್ಲಾಸವನ್ನು ತರುವುದರ ಜೊತೆ ತಾಯಿಯ ಧನುರ್ಮಾಸ ಪೂಜಾ ವೈಭವತೆಗೆ ಸಾಕ್ಷಿಯಾಗಲಿದೆ. ‘ದಕ್ಷಿಣಾಯನ’ ಎಂಬ ಕತ್ತಲೆಯನ್ನು ಹೊರದೂಡಿ ‘ಉತ್ತರಾಯಣ’ಎಂಬ ಬೆಳಕನ್ನು ಸಂಧಿಸುವ ಈ ಉತ್ತಮ ಕಲ್ಪದಲ್ಲಿ ಸರ್ವಮಂಗಳೆಯನ್ನು ಶೃದ್ಧಾ ಭಕ್ತಿಯಿಂದ ಪೂಜಿಸಿ ಪ್ರಾರ್ಥಿಸಿದರೆ ಸರ್ವಾಭೀಷ್ಟಗಳೂ ಪುಣ್ಯಪ್ರದವಾಗಿ ಲಭಿಸುತ್ತದೆ.
 
ಅವಳ ಕೃಪಾಕಟಾಕ್ಷ ಒಂದಿದ್ದರೆ ಸಾಕು. ಧನುರ್ಮಾಸ ಬಂತೆಂದರೆ ದಶಂಬರದ ಮೈ ಕೊರೆಯುವ ಹಿಮಗಾಳಿಯ ಶೀತಲ ಚಳಿಯಲ್ಲೂ ಎದ್ದು ಪಶ್ಚಿಮಾಂಭುದಿಯಲ್ಲಿ ಅರಣೋದಯವಾಗುವ ಮೊದಲೇ ಮಂಗಳಮ್ಮನನ್ನು ಕಾಣಲು ದೇವಳಕ್ಕೆ ಹೋಗುವುದೇಯೊಂದು ಆನಂದ.❄️🤩
 
ಎಷ್ಟೇ ಕಠಿಣವಾದರೂ ಸರಿಯೇ. ಮೈ ಕೊರೆಯುವ ಚಳಿಯ ತೀವ್ರತೆಯನ್ನು ಜಡತ್ವವನ್ನು ಮಂಜಿನ ತಂಬೆಲರನ್ನು ಲೆಕ್ಕಿಸದೆ ಪ್ರದೋಷಕಾಲದ ನಿದ್ರಿಸಿದ ಪ್ರಕೃತಿಯ ನೀರವ ಸೌಂದರ್ಯವನ್ನು ಆಸ್ವಾದಿಸುತ್ತಾ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ದೇವಿಗೆ ನಡೆಯುವ ಉಷಾ ಕಾಲದ ಧನುರ್ಮಾಸದ ಮಹಾಪೂಜೆಯನ್ನು ಕಂಡು ಕೃತಾರ್ಥರಾಗಲು ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ನಾಳಿನ ಬುಧವಾರದಿಂದ ಪ್ರಾತಃಕಾಲ ತಾಯಿಯ ಧನುಪೂಜೆಗೆ ಭಕ್ತ ಸಾಗರವೇ ಹರಿದು ಬರಲಿದೆ.
 
ಅನನ್ಯ ಭಕ್ತಿಯಿಂದ ಪರಮೇಶ್ವರಿಯ ಶರಣು ಹೋಗಿ, ಏಕಾಗ್ರಚಿತ್ತರಾಗಿ ಧನುರ್ಮಾಸ ಪೂಜೆಯಲ್ಲಿ ಪಾಲ್ಗೊಂಡು ಅವಳ ಕೃಪೆಯಿಂದ ನಮ್ಮ ಸಕಲ ತಾಪತ್ರಯ ಮುಕ್ತವಾಗಿ ಇಷ್ಟಾರ್ಥಸಿದ್ಧಿಯಾಗಿ ಧನಧಾನ್ಯ ಪುತ್ರಾದಿ ಸೌಖ್ಯಭಾಗ್ಯಗಳನ್ನು ಹೊಂದುವುದರಲ್ಲಿ ಸಂಶಯವಿಲ್ಲ.
 
“ಧನುರ್ಮಾಸವು (ಕೋದಂಡ ಮಾಸ, ಚಾಪ ಮಾಸ) ಇಪ್ಪತ್ತೊಂಭತ್ತು ದಿನಗಳ ಸುಧೀರ್ಘ ಅವಧಿಯಾಗಿದ್ದು ಸೂರ್ಯನು ತನ್ನ ಚಲನೆಯನುಸಾರವಾಗಿ ಧನುರ್ರಾಶಿಯಿಂದ ಮಕರರಾಶಿಗೆ ಪ್ರವೇಶಿಸುವ ಹಿಂದೂ ಪಂಚಾಂಗದ ಒಂಭತ್ತನೇಯ ತಿಂಗಳಾಗಿರುತ್ತದೆ. 
ಈ ವರ್ಷದಲ್ಲಿ ಮಾರ್ಗಶಿರ ಮಾಸವು ದಶಂಬರ ೫’ರಿಂದ ಜನವರಿ ೨’ರ ವರೆಗೆ ಹಾಗು ಜನವರಿ ೩’ರಿಂದ ಪುಷ್ಯ ಮಾಸವು ಆವೃತ್ತಿಯಲ್ಲಿದ್ದು ಪ್ರಸ್ತುತ ೨೦೨೧-೨೦೨೨’ನೇ ವರ್ಷದ ಅನ್ವಯ ನಾಳಿನ ದಶಂಬರ ೧೬’ನೇ ಗುರುವಾರ ದಿಂದ ಮೊದಲ್ಗೊಂಡು ಬರುವ ಜನವರಿ ೧೪’೨೦೨೨’ನೇ ಶುಕ್ರವಾರದ ವರೆಗೆ ಚಾಲ್ತಿಯಲ್ಲಿದ್ದು,’ಮಾರ್ಗಶಿರ’ ಹಾಗೂ ‘ಪುಷ್ಯ’ ಮಾಸದ ಮಧ್ಯಭಾಗದಲ್ಲಿ ಧನುರ್ಮಾಸವು ಕೂಡಿರುತ್ತದೆ.
 
‘ಧನುರ್ಮಾಸ’ ಎಂದರೆ ಸೂರ್ಯನು ಮೂಲಾ ನಕ್ಷತ್ರದಿಂದ ಹಿಡಿದು ಉತ್ತರಾಷಢ ನಕ್ಷತ್ರವು ೧’ನೇ ಪಾದದವರೆಗಿನ ಧನುರಾಶಿಯಲ್ಲಿ ಸಂಚರಿಸುವ ಸಮಯವನ್ನು ಧನುರ್ಮಾಸ ಎಂದು ಕರೆಯುತ್ತಾರೆ._
 
ಧನುರ್ಮಾಸದ ಆರಂಭವು ಸೂರ್ಯನ ಪರಿಚಲನೆಯ ಆಧಾರದ ಮೇಲೆ ನಿರ್ಧಾರಿತವಾಗಿದ್ದು ವೃಶ್ಚಿಕ ರಾಶಿಯಿಂದ ಸೂರ್ಯನ ಧನುರ್ರಾಶಿಯ ಪ್ರವೇಶವನ್ನು ‘ಧನುರ್ ಸಂಕ್ರಮಣವೆಂದು (ಇಂದಿನ ದಿವಸ) ಹಾಗು ಧನುರ್ರಾಶಿಯಿಂದ ಮಕರ ರಾಶಿಗೆ ಸೂರ್ಯನ ಪ್ರವೇಶವನ್ನು ಮಕರ ಸಂಕ್ರಮಣವೆಂದೂ (ಮುಂದಿನ ಜನವರಿ ೧೪) ಈ ಎರಡೂ ಸಂಕೀರ್ಣ ಅವಧಿಗಳ ನಡುವಿನ ಇಪ್ಪತ್ತೊಂಭತ್ತು ದಿನಗಳೇ ಧನುರ್ಮಾಸ.
 
(೧) ಮಕರ ಸಂಕ್ರಮಣದಿಂದ ಕರ್ಕಾಟಕ ಸಂಕ್ರಮಣದ ವರೆಗಿನ ಆರು ತಿಂಗಳು ಉತ್ತರಾಯಣ.
(೨) ಕರ್ಕಾಟಕ ಸಂಕ್ರಮಣದಿಂದ ಮಕರ ಸಂಕ್ರಮಣದ ವರೆಗಿನ ಆರು ತಿಂಗಳು ದಕ್ಷಿಣಾಯನ.
‘ಆಯನ’ ಎಂದರೆ ಪಥ, ಸಂಚಲನ ಎಂದರ್ಥ.
ಪರಿಸಮಾಪ್ತಿಗೊಳ್ಳುವ ಒಂದು ತಿಂಗಳ ಅವಧಿ.
 
ಮಕರ ಸಂಕ್ರಮಣದಿಂದ ಕರ್ಕಾಟಕ ಸಂಕ್ರಮಣದ ವರೆಗಿನ ೬’ತಿಂಗಳು *ಉತ್ತರಾಯಣ* ಕರ್ಕಾಟಕ
 ಸಂಕ್ರಮಣದಿಂದ ಮಕರ ಸಂಕ್ರಮಣದ ವರೆಗಿನ ೬’ ತಿಂಗಳು *ದಕ್ಷಿಣಾಯನ*
ದೇವಾನು-ದೇವತೆಗಳಿಗೆ ವರ್ಷದ ಆರು ಪಂಚಾಂಗದ ತಿಂಗಳುಗಳು ಒಂದು ದಿನಕ್ಕೆ ಸರಿಸಮಾನ ವಾಗಿರುತ್ತದೆ. ಇದನ್ನು *’ಉತ್ತರಾಯಣ’* ಎಂದು ಕರೆಯುತ್ತಾರೆ. ಇದು ಹಗಲು.
ಹಾಗು ಉಳಿದ ಮತ್ತೊಂದು ಆರು ತಿಂಗಳುಗಳು ಒಂದು ರಾತ್ರಿಗೆ ಸರಿಸಮಾನ ವಾಗಿರುತ್ತದೆ. ಇದನ್ನು *’ದಕ್ಷಿಣಾಯನ’* ಎಂದು ಕರೆಯುವರು. ಇದು ರಾತ್ರಿ.
 
ಆದ್ದರಿಂದ ಧನುರ್ಮಾಸವು ದಕ್ಷಿಣಾಯಣದ ಕಟ್ಟಕಡೆಯ ತಿಂಗಳಾಗಿರುತ್ತದೆ. ದಕ್ಷಿಣಾಯನದ ಆರು ತಿಂಗಳುಗಳಲ್ಲಿ ಎರಡೆರಡು ತಿಂಗಳಿಗೆ ಒಂದು ಯಾಮದಂತೆ ಯಾಮತ್ರಯ ಪರಮಾತ್ಮನಿಗೆ ಅತ್ಯoತ ಪ್ರಿಯವಾಗಿದ್ದು ಮೊದಲಿನ ಎರಡು ಯಾಮಗಳು ಚಾತುರ್ಮಾಸ್ಯ ಕಾಲವಾಗಿದೆ. ಮೂರು ಯಾಮಗಳಲ್ಲಿ ಆಷಾಢ ಏಕಾದಶಿಯಿಂದ ಪ್ರಾರಂಭವಾದ ಚಾತುರ್ಮಾಸ್ಯದಲ್ಲಿ ಮಲಗಿದ ದೇವತೆಗಳು ಕಾರ್ತೀಕ ಮಾಸದ ಶುಕ್ಲ ಉತ್ಥಾನ ದ್ವಾದಶಿಯಂದು ಜಾಗೃತರಾಗುತ್ತಾರೆ. ಮಾರ್ಗಶಿರ ಮಾಸವಾದರು ಮೂರನೇ ಯಾಮದ ಕಡೆ ಪ್ರಹರವಾಗಿದ್ದು ಬಳಿಕ ಬರುವ ಧನುರ್ಮಾಸ ದೇವತೆಗಳ ಅರುಣೋದಯದ ಕಾಲವಾಗಿದೆ.
 
ಆಯಾ ತಿಂಗಳ ಹುಣ್ಣಿಮೆಯಂದು ಇರುವ ನಕ್ಷತ್ರದ ಆಧಾರದ ಮೇಲೆ ಮಾಸದ ಹೆಸರನ್ನು ನಿರ್ಣಯಿಸಲಾಗುತ್ತದೆ. ಮಾರ್ಗಶಿರ ಮಾಸದಲ್ಲಿ ಹುಣ್ಣಿಮೆಯಂದು *ಮೃಗಶಿರ ನಕ್ಷತ್ರ ಬರುತ್ತದೆ. ಅದಕ್ಕೆ ಇದು ಮಾರ್ಗಶಿರ ಹೆಸರು.* ಮಾರ್ಗಶಿರ ಮಾಸದ ಆರಂಭದೊಂದಿಗೆ ಹೇಮಂತ ಋುತು ಪ್ರಾರಂಭವಾಗುತ್ತದೆ. ಹೇಮಂತ ಋತು ಚಳಿಗಾಲದ ಪರ್ವಕಾಲ. 🤩
 
ದಕ್ಷಿಣಾಯನವು ಮುಗಿದು ಉತ್ತರಾಯಣವು ಅಂತೆಯೇ ಉತ್ತರಾಯಣವು ಮುಗಿದು ದಕ್ಷಿಣಾಯನವು ಆರಂಭವಾಗುವ ಕಾಲಕ್ಕೆ ಸಂಧಿಕಾಲವೆಂದು ಹೇಳುತ್ತಾರೆ. ರಾತ್ರಿಯು ಮುಗಿದು ಸೂರ್ಯೋದಯವಾಗುವ ತನಕದ ಬ್ರಾಹ್ಮೀ ಮುಹೂರ್ತವೂ ಒಂದು ಸಂಧಿಕಾಲ. ಪೂರ್ವಾಹ್ನ ಮತ್ತು ಅಪರಾಹ್ನ ಇವುಗಳ ನಡುವಿನ ‘ಮಧ್ಯಾಹ್ನವೂ’, ಹಗಲು-ರಾತ್ರಿಗಳ ನಡುವಿನ ‘ಸಾಯಂಕಾಲವೂ’, ಸಂವತ್ಸರಗಳ, ಋತುಗಳ, ತಿಂಗಳುಗಳ ‘ಅಂತ್ಯ- ಆದಿಗಳ’, ನಡುವಿನ ಸಮಯವೂ ಸಂಧಿಕಾಲಗಳಾಗಿವೆ. ಸಂಧಿಕಾಲವೆಂದರೆ ಪ್ರಕೃತಿಯಲ್ಲಿ ಬಹುಮುಖ್ಯ ಮಾರ್ಪಾಟುಗಳಾಗುವ ಕಾಲವಾಗಿದ್ದು ಸಂಧಿಕಾಲದಲ್ಲಿ ಉತ್ಪನ್ನವಾಗುವ ಈಶ್ವರೀ ಚೈತನ್ಯವು ಸಂಧ್ಯಾ ಎನಿಸುವುದು. ಈ ಶಕ್ತಿಗೆ ಮಾಡುವ ವಂದನೆಯು ಸಂಧ್ಯಾವಂದನೆ ಎನಿಸಿ ಧನುರ್ಮಾಸವೆಂದು ಪರಿಗಣಿಸಲ್ಪಟ್ಟಿದೆ.
 
ಧನುರ್ಮಾಸದ ಪ್ರಾರಂಭದ ಘಳಿಗೆಯು ದೇವಾನು’ದೇವತೆಗಳಿಗೆ ಇರುಳು ಸಮಾಪ್ತಿಯಾಗಿ ಹಗಲು ಪ್ರಾರಂಭಗೊಂಡು ಸಕಲ ಬ್ರಹ್ಮಾಂಡಕ್ಕೂ ಬ್ರಾಹ್ಮೀ ಮುಹೂರ್ತದ ಆರಂಭವೆಂಬ ಪ್ರತೀತಿ. ಆದರಿಂದ ದೇವತಾರಾಧನೆಗೆ ಉತ್ತರಾಯಣವು ಯೋಗ್ಯವಾದ ಕಾಲ. ಇದರ ಪ್ರಕಾರ ಸರ್ವದೈವಿಕ ಶಕ್ತಿಗಳು ಧನುರ್ಮಾಸದ ಈ ಸನ್ನಿವೇಶದಲ್ಲಿ ಮುಂಜಾನೆಯ ಬ್ರಾಹ್ಮೀ ಮುಹೂರ್ತ (ಸೂರ್ಯೋದಯದ ಮೊದಲಿನ ೯೦’ನಿಮಿಷಗಳ ಅವಧಿ)ದಲ್ಲಿ ಎಚ್ಚರಗೊಳ್ಳುತ್ತಾರೆ ಎಂಬ ದೃಢವಾದ ನಂಬಿಕೆಯಿದೆ.
 
ಬೆಳಗ್ಗಿನ ಜಾವ ರಾತ್ರಿ ಮುಗಿದು ಅರುಣೋದಯದ ತನಕದ ಬ್ರಾಹ್ಮೀ ಮುಹೂರ್ತವು ಶಾಂತವೂ, ರಮಣೀಯವೂ ಆಗಿದ್ದು ಆಧ್ಯಾತ್ಮಿಕ ಸಾಧನೆಗೆ ಸಂಧ್ಯಾವಂದನೆಗೆ, ಧ್ಯಾನಕ್ಕೆ, ದೇವತಾರಾಧನೆಗೆ ಶ್ರೀ ದೇವಿಯ ಸಾಕ್ಷಾತ್ಕಾರಕ್ಕೆ ಅತ್ಯಂತ ಪ್ರಶಸ್ತವಾಗಿರುತ್ತದೆ. ಅದೇ ತೆರನಾಗಿ ಮೇಲ್ಕಂಡ ಕಾರಣದಿಂದ ತಾಯಿ ಮಂಗಳಾದೇವಿಗೆ ನಾಳೆಯಿಂದ ವಿಶೇಷ ಧನುರ್ಮಾಸ ಪೂಜೆಯು ಮುಂಜಾನೆಯ ಸೂರ್ಯೋದಯದ ಮುಂಚಿತವಾಗಿ ೫.೪೫’ಕ್ಕೆ ಸರಿಯಾಗಿ ನಡೆಯಲಿದೆ.
 
ಪ್ರಾತಃಕಾಲದ ಸವಿನಿದ್ದೆಯಿಂದೆದ್ದ ಜಗನ್ಮಾತೆಯು ಜಲಾಭಿಷೇಕದೊಂದಿಗೆ ಶುಚಿರ್ಭೂತಳಾಗಿ ಧನುರ್ಮಾಸದ ಮಹಾಪೂಜೆಯನ್ನು ಸ್ವೀಕರಿಸಲು ಹಾಗೂ ತನ್ನನ್ನು ಕಾಣಲು ತವಕದಿಂದ ಆಗಮಿಸಿದ ಸರ್ವರಿಗೂ ತನ್ನ ಮೂಲ ಬಿಂಬ ಸ್ವರೂಪದಲ್ಲಿ ದರ್ಶನವನ್ನೀಯ್ದು ಜಿನುಗುವ ಧಾರಪಾತ್ರೆಯೊಂದಿಗೆ ಸ್ವರ್ಣದೃಷ್ಟಿ ನೇತ್ರಳಾಗಿ..ಮಾಂಗಲ್ಯ, ಪುರಾತನ ವಜ್ರ ಕಂಠೀ ಹಾರವನ್ನು ಧರಿಸಿ ಪುಷ್ಪ ಹಾರಗಳನ್ನು ತೊಟ್ಟು ನಮ್ಮೆಲ್ಲರಿಗೂ ಧನ್ಯತೆಯ ಭಾವವನ್ನು ಕರಣಿಸುವಳು.
 
ಮಂಗಳೆ ಅರ್ಚನಾ ಪ್ರಿಯೆ. ದೇವಿಯ ಚರಣಾರವಿಂದದ ಬಳಿಯ ಶ್ರೀ ಚಕ್ರ ಪೀಠಕ್ಕೆ ಕುಂಕುಮದಿಂದ ಅರ್ಚನೆಯು ನಡೆದ ನಂತರ ಮಂಗಳಮ್ಮನಿಗೆ ಧನುರ್ಮಾಸದ ಮಹಾಪೂಜೆಯು ನಡೆಯುತ್ತದೆ. ಬಳಿಕ ನಿತ್ಯ ಪೂಜೆಯಂತೆ ಆರತಿಯು ನಡೆಯುತ್ತದೆ. ಧನುರ್ಮಾಸದಲ್ಲಿ ಪ್ರತಿದಿನ ಬ್ರಾಹ್ಮೀ ಮುಹೂರ್ತದಲ್ಲಿ ಧನುಪೂಜೆಯಿಂದ ಬಿಂಬದಲ್ಲಿ ಪೂರ್ಣಕಳಾ ಸಾನಿಧ್ಯಳಾಗಿ ಮೆರೆದು ಪ್ರಸನ್ನಳಾಗುವ ದೇವಿಯಲ್ಲಿ ಪ್ರೀತಿಯಿಂದ ಏನನ್ನೇ ಪ್ರಾರ್ಥಿಸಿಕೊಂಡರೂ ಅಪೇಕ್ಷಿತ ವಾಂಛಿತ ಫಲವನ್ನು ಕರುಣಿಸಿ ನಮ್ಮೆಲ್ಲರನ್ನು ಉದ್ಧರಿಸುತ್ತಾಳೆ.
 
ಅಲ್ಲದೆ ದೇವಳದಲ್ಲಿ *೧೯೯೪*’ರಿಂದ ಧನುರ್ಮಾಸ ಪೂಜೆಯನ್ನು ಸೇವಾರೂಪದಲ್ಲಿ ನಡೆಸಲು ಆರಂಭವಾಯಿತು.
 
ನೀವೇದಯನ್ ಮೇ ಮುದ್ಗಾನ್ನo ಸ ವೈ ಭಾಗವತೋತ್ತಮಃ ಕೊದಂಡಸ್ಥೆ ಸವಿತರಿ ಮುದ್ಗಾನ್ನಂ ಯೋ ನಿವೇದಯೇತ್ ಸಹಸ್ರವಾರ್ಷಿಕೀ ಪೂಜಾ ದಿನೈನೈಕೇನ ಸಿಧ್ಯತ
 
ಅರ್ಥಾತ್ ಧನುರ್ಮಾಸದಲ್ಲಿ ಯಾರು ಒಂದು ತಿಂಗಳ ಪರ್ಯಂತ ಅರಣೋದಯ ಪೂರ್ವದಲ್ಲಿ ಎದ್ದು ಭಕ್ತಿಯಿಂದ ಹುಗ್ಗಿಯ ನೈವೇದ್ಯವನ್ನು ಮಾಡಿ ಅರ್ಪಿಸಿದಲ್ಲಿ ಸಹಸ್ರವರ್ಷದ ಪೂಜಾಫಲವು ಲಭಿಸುತ್ತದೆ. ಅಂತೆಯೇ ಧನುರ್ಮಾಸದಲ್ಲಿ ವಿಶೇಷತಃ ಶ್ರೀದೇವಿಯ ಪ್ರೀತ್ಯರ್ಥವಾಗಿ ‘ಬೆಳ್ತಿಗೆ ಅನ್ನ, ಹೆಸರು ಬೇಳೆ, ಕೊಬ್ಬರಿ ಹೆಚ್ಚಿನ ಪ್ರಮಾಣದ ತುಪ್ಪವನ್ನು ಸೇರಿಸಿ ಸವಿಯಾದ ಸಿಹಿ ಘೃತಾನ್ನವನ್ನು (ಮುದ್ಗಾನ್ನ) ಶ್ರೀ ದೇವಿಗೆ ನೈವೇದ್ಯವನ್ನಾಗಿ ಅರ್ಪಿಸಲಾಗುತ್ತದೆ. ಅಲ್ಲದೆ ಮಕರ ಸಂಕ್ರಾಂತಿಯ ದಿನದಂದು ಇದೇ ತೆರನಾಗಿ ನೈವೇದ್ಯವನ್ನು ಲಘು ಉಪಹಾರದಂತೆ ಪ್ರಸಾದರೂಪದಲ್ಲಿ ಭಕ್ತಾದಿಗಳಿಗೆ ನೀಡಲಾಗುತ್ತದೆ.
 
ತಾಯಿಯ ಮೇಲೆ ಪೂರ್ಣ ವಿಶ್ವಾಸದಿಂದ ಮನಃಬಿಚ್ಚಿ ಕಷ್ಟ ಸುಖಗಳನ್ನು ಹೇಳಿಕೊಳ್ಳುವ ನಮಗೆ ರಕ್ಷಿಸಲು ಆಕೆಯೊಬ್ಬಳೇ ಸಮರ್ಥಳು ಎನ್ನುವುದಕ್ಕೆ ನಾಳಿನಿಂದ ಆಗಮಿಸತಕ್ಕ ಭಜಕ ವೃಂದವೇ ಸಾಕ್ಷಿಯಾಗಲಿದೆ.
 
ಮಂಗಳೆಯನ್ನು ನಂಬಿ ಬದುಕುವವರಿಗೆ ಕಷ್ಟವೆಂಬುವುದು ಇಲ್ಲ. ತನ್ನ ದಯೆಯಿಂದ ನಮ್ಮೆಲ್ಲರನ್ನು ಆಕೆ ಸುಖದಲ್ಲಿರಿಸಿದ್ದಾಳೆ. ಮಹಾಪುಣ್ಯಕರವಾದ ಧನುರ್ಮಾಸದ ಪ್ರಾತಃಕಾಲದಲ್ಲಿ ದೇವಿಯ ಸನ್ನಿಧಿಗೆ ಪೊಡಮಟ್ಟು ಮಂಗಳಾಂಭೆಗೆ ನಡೆಯುವ ಧನುಪೂಜೆಯನ್ನು ಕಣ್ತುಂಬಿಕೊಂಡು ಬಾಳಿನಲ್ಲಿ ಸಾರ್ಥಕತೆಯನ್ನು ಪಡೆಯೋಣ. ಸರ್ವರ ಮನೋ ಸಂಕಲ್ಪಗಳೂ ಸಿದ್ಧಿಸಿ ಭವಿಷ್ಯದಲ್ಲಿ ಸರ್ವಾದ ಯಶಸ್ಸನ್ನುಗಳಿಸೋಣ.
invitation dhanurmasa 2021