Mangaladevi Thursday, 13th January 2022

On this Day the 13th of January 2022 have a blissful darshan of Sri Devi

ಓಂ ಜಯದೇವಿ ನಮಸ್ತುಭ್ಯಂ ಜಯ ಭಕ್ತ ವರಪ್ರದೇ ।
ಜಯಶಂಕರ ವಾಮಾಂಗಿ । ಮಂಗಳೇ ಸರ್ವ ಮಂಗಳೇ ॥
ಓಂ ಜಯ ರುದ್ರೇ ವಿರೂಪಾಕ್ಷೇ ಜಯಾತೀತೇ ನಿರಂಜನೇ।
ಜಯ ಕಲ್ಯಾಣಸುಖದೇ ಜಯ ಮಂಗಲದೇ ಶುಭೇ ॥

ಕದಲೀ ಶ್ರೀ ಮಂಜುನಾಥ ದೇವರ ಸನ್ನಿಧಾನದಿಂದ ಕದ್ರೀ ಉತ್ಸವದ ಪ್ರಯುಕ್ತ ಸಮರ್ಪಿತವಾದ ಸೀರೆಯನ್ನು ಧರಿಸಿ ಸರ್ವಾಲಂಕೃತಳಾದ ಶ್ರೀ ಮಂಗಳಾದೇವಿ ಅಮ್ಮನವರು.

ತೌಳವಾಧಿಪತಿ ಮಂಜುನಾಥನ ಪಟ್ಟದರಸಿ ಮಂಗಳಾಪುರದ ಮಹಾರಾಣಿಯಾಗಿ ಮೆರೆದು ಅವಳ ಮಡಿಲಲ್ಲಿ ಅರ್ತಿಯಿಂದ ನಮ್ಮೆಲ್ಲರನ್ನು ಪರಿ ಪಾಲಿಸುವ ಲೋಕ ಮಾತೆಗೆ ತನ್ನ ಶ್ರೀ ಸ್ವಾಮಿಯ ದೇವಳದಿಂದ ಆಹ್ವಾನ ರೂಪದಲ್ಲಿ ವಿಶೇಷ ಗೌರವಾತೀಥ್ಯವಾಗಿ ನೀಡಿದ ಸೀರೆಯಲ್ಲಿ ಅಲಂಕೃತಳಾಗಿರುವ ಜಗನ್ಮಂಗಳೆಯು ತನ್ನ ದರ್ಶನ ಭಾಗ್ಯವನ್ನು ಭಕ್ತಕೋಟಿಗೆ ಇಂದು ಅನುಗ್ರಹಿಸಿದ್ದಾಳೆ.

ಇಂದು ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವರ್ಷಾವಧಿ ಜಾತ್ರೆಯ ಪ್ರಾರಂಭದ ಮುನ್ನಾದಿನ ಕದಳಿ ಪೀಠಾಧಿಪತಿಗಳು ನಮ್ಮ ಶ್ರೀ ಮಂಗಳಾದೇವಿ ದೇವಸ್ಥಾನಕ್ಕೆ ಆಗಮಿಸಿ ಫಲ ಪುಷ್ಪ, ಸೀರೆ ಪೀತಾಂಬರ ಮೊದಲಾದ ಸುವಸ್ತುಗಳನ್ನು ಸಮರ್ಪಿಸಿ ಕದಲೀ ಮಂಜುನಾಥ ದೇವರ ಜಾತ್ರೆಯ ಉತ್ಸವಾದಿ ಮಹೋತ್ಸವಗಳು, ರಥ ಸವಾರಿಯು ಸಾಂಗದಿಂದ ನಿರ್ವಿಘ್ನವಾಗಿ ನಡೆಯಬೇಕೆಂದು ಶ್ರೀ ದೇವಿಯ ಸನ್ನಿಧಾನದಲ್ಲಿ ಭಕ್ತಿ ಪೂರ್ವಕವಾಗಿ ಸಂಪ್ರಾರ್ಥಿಸಿ ಆಕೆಗೆ ತನ್ನ ಯಜಮಾನನ ಉತ್ಸವಕ್ಕೆ ಆದರದ ಆಮಂತ್ರಣವನ್ನು ನೀಡುವ ಪದ್ದತಿ ತಲ-ತಲಾಂತರದಿಂದ ಪೂರ್ವ ಶಿಷ್ಟಾ ಸಂಪ್ರದಾಯದಂತೆ ಇಂದಿಗೂ ನಡೆದು ಬಂದಿದೆ.

ಅದೇ ಪ್ರಯುಕ್ತ ಶ್ರೀ ಕದಲೀ ಕ್ಷೇತ್ರದಲ್ಲಿ ನಾಳಿನ ಮಕರ ಸಂಕ್ರಮಣದ ದಿನ ಪ್ರಾತಃಕಾಲ ಸಮಯ ೪'ಕ್ಕೆ ಕದ್ರೀ ತೀರ್ಥ'ದೊಂದಿಗೆ ರಾತ್ರಿ ೧೦'ಕ್ಕೆ ಧ್ವಜಾರೋಹಣವಾಗಿ ಒಂಭತ್ತು ದಿನಗಳ ಪರ್ಯಂತ ಶ್ರೀ ಮಂಜುನಾಥ ಸ್ವಾಮಿಯ ವರ್ಷಾವಧಿ ಉತ್ಸವವು ಶುಭಾರಂಭಗೊಳ್ಳಲಿದೆ. ಹಾಗೂ ಬರುವ ೨೧'ರ ಶುಕ್ರವಾರದಂದು ಶ್ರೀ ಮಂಜುನಾಥ ದೇವರ ಶ್ರೀಮನ್ಮಾಹ ರಥೋತ್ಸವವು ವಿಜೃಂಭಣೆಯಿಂದ ನಡೆಯಲಿದೆ.

ಈ ಶುಭಾವಾಸರದಲ್ಲಿ ಕದ್ರಿ ಉತ್ಸವದ ಪೂರ್ವಾಭಾವಿಯಾಗಿ ಇಂದಿನ ದಿವಸದಂದು ವಿಶೇಷವಾಗಿ ಕದಲೀ ಮಂಜುನಾಥನ ಸನ್ನಿಧಿಯಿಂದ ತನಗರ್ಪಿತವಾದ ಗುಲಾಬಿ- ಚೌಕುಳಿ ಮಿಶ್ರಿತ ವರ್ಣದ ಸೀರೆಯನ್ನು ಸಂತೋಷದಿಂದ ಸ್ವೀಕರಿಸಿ ಅಭಯ ವರದ ಹಸ್ತಳಾದ ಮಹಾದೇವಿಯು ಪನ್ನಗ ಕಿರೀಟಿಣಿಯಾಗಿ ನೀಳ ಕೇಶಾಲಂಕಾರದಲ್ಲಿ ತನ್ನ ಪಾರ್ಶ್ವ ಹಸ್ತದಲ್ಲಿ ಪರಶುವನ್ನು ವಾಮ ಹಸ್ತದಲ್ಲಿ ಗದೆಯನ್ನು ಪಿಡಿದು ತ್ರಿಶೂಲ ಧಾರಿಣಿಯಾಗಿ ಸಿಂಹ ವಾಹಿನಿಯಾಗಿ ನಮ್ಮೆಲ್ಲರ ಸರ್ವ ಅಭೀಷ್ಠವನ್ನು ಕಲ್ಪವೃಕ್ಷದಂತೆ ಸಲ್ಲಿಸುವವಳಾದ ಸರ್ವ ಮಂಗಳೆಯು ರಾಜ ವೈಭವದಿಂದ ವಿಜೃಂಭಿಸುತ್ತಿರುವಳು

ಕದಲೀ ಕ್ಷೇತ್ರದಿಂದ ಸಮರ್ಪಿತವಾದ ಸೀರೆಯಿಂದ ಅಲಂಕೃತಗೊಂಡು ಪ್ರೀತ್ಯರ್ಥಳಾಗಿ ಮೆರೆಯಲ್ಪಡುವ ಸಿಂಹಾಸನಸ್ಥಿತೆಯು ಈ ಶುಭ ಸಂದರ್ಭದಲ್ಲಿ ಜ್ಞಾನ-ಭಕ್ತಿ ಇಷ್ಟಾರ್ಥವನ್ನು ಕರುಣಿಸಿ ನಿರಂತರ ನಮ್ಮೆಲ್ಲರ ಕೈಹಿಡಿದು ಮುನ್ನಡೆಯಿಸೆಂದು ವಿಶ್ವದ ಸಕಲ‌ ಚರಾಚರ ಜೀವರಾಶಿಗಳಿಗೂ ನವಚೈತನ್ಯ ತುಂಬಿ ಜಗತ್ತಿನಲ್ಲಿ ಆಯುರಾರೋಗ್ಯ ನೆಲೆಸುವಂತಾಗಲಿ ಎಂದೂ ಮಂಗಳಮ್ಮನ ಚರಣಾರವಿಂದಗಳಲ್ಲಿ ಭಕ್ತಿಯಿಂದ ಸಂಪ್ರಾರ್ಥಿಸೋಣ.

ನಮಸ್ತ್ರೀ ಲೋಕಮಾತ್ರೆತೇ ನಮೋ ವೇದಾಂತರೂಪಿಣಿ ನಮಃ ಶಿವಾಂಕ ವಾಸಿನ್ಯೈ ದುರ್ಗಾದೇವ್ಯೈ ನಮೋ ನಮಃ ಪರಾತ್ಪರ ಸ್ವರೂಪಾಯೈ ಮಂಗಳಾಯೈ ನಮೋ ನಮಃ