05 August 2022 – Varamahalakshmi Pooja

varalakshmi pooja invitation

*ও.🪷✨ಶ್ರೀ ವರ ಮಹಾಲಕ್ಷ್ಮೀ ವೃತ✨🪷.ও*

 
೦೫.೦೮.೨೦೨೨’ನೇ ಶುಕ್ರವಾರ.༃࿐
 
ಭಕ್ತ ಪರಾಧೀನಳೂ, ದಯಾಸಾಗರಿಯೂ, ಲೋಕಪರಿಪಾಲಕಳೂ ಆದ ನಮ್ಮ ಶ್ರೀ ಮಂಗಳಾದೇವಿ ಅಮ್ಮನ ಸನ್ನಿಧಾನದಲ್ಲಿ ನಾಳಿನ ಶ್ರಾವಣ ಶುಕ್ರವಾರ ಶ್ರೀ ವರ ಮಹಾಲಕ್ಷ್ಮೀ ವೃತ
 
ಲಕ್ಷ್ಮೀಂ ಕ್ಷೀರಸಮುದ್ರರಾಜತನಯಾಂ ಶ್ರೀರಂಗಧಾಮೇಶ್ವರೀಂ
ದಾಸೀಭೂತಸಮಸ್ತದೇವವನಿತಾಂ ಲೋಕೈಕದೀಪಾಂಕುರಾಂ
ಶ್ರೀಮನ್ಮಂದಕಟಾಕ್ಷಲಬ್ಧವಿಭವಬ್ರಹ್ಮೇಂದ್ರಗಂಗಾಧರಾಂ ತ್ವಾಂ ತ್ರೈಲೋಕ್ಯಕುಟುಂಬಿನೀಂ ಸರಸಿಜಾಂ ವಂದೇ ಮುಕುಂದಪ್ರಿಯಾಮ್ ।🌹
 
ಮಂಗಳೂರನ್ನು ನೆನೆದಾಗ ಮೊದಲು ನೆನಪಾಗುವುದೇ ಶ್ರೀ ಮಂಗಳಾದೇವಿ ಅಮ್ಮನ ಸನ್ನಿಧಾನ. ಯಾವುದೇ ಕಷ್ಟವಿದ್ದರು ದೇವಿಯನ್ನು ಸ್ಮರಿಸಿದರೆ, ಅವಳ ದರ್ಶನ ಮಾಡಿದರೆ ಸಂಕಷ್ಟಗಳೆಲ್ಲಾ ನಿವಾರಣೆಯಾಗುತ್ತದೆ. ಹೀಗೆ ಪ್ರಾರ್ಥಿಸಿದನ್ನು ಅನುಗ್ರಹಿಸಿ ಸದಾ ವಾತ್ಸಲ್ಯಪೂರ್ಣ ದೃಷ್ಟಿಯಿಂದ ನೋಡುವ ಮಹಾದೇವಿಯ ಸನ್ನಿಧಾನದಲ್ಲಿ ನಾಳಿನ ಶ್ರಾವಣ ಶುಕ್ರವಾರದಂದು ವರ ಮಹಾಲಕ್ಷ್ಮೀ ವೃತವು ವರ್ಷಂಪ್ರತಿಯಂತೆ ಸಂಪ್ರದಾಯಬದ್ಧವಾಗಿ ವಿಜೃಂಭಣೆಯಿಂದ ನಡೆಯಲಿದೆ.
 
ಇದೀಗ ಶ್ರಾವಣ ಮಾಸ. ಹಬ್ಬಗಳ ಸರಮಾಲೆಯೇ ಪ್ರಾರಂಭ. ಶ್ರಾವಣ ಮಾಸ ನಿಸರ್ಗವೇ ನಲಿವಿನ ಸಂಭ್ರಮದ ಸಿರಿಯನ್ನು, ಸಂತೋಷವನ್ನು ನೀಡುವ ಸುಂದರ ಸಮಯ. ಇದು ಶ್ರಾವಣಮಯ; ಆನಂದಮಯ. ಶುಭಕಾರ್ಯ, ದೇವತಾರಾಧನೆಗಳು ತಮ್ಮ ಅಸ್ತಿತ್ವವನ್ನು ಮೆರೆಸುತ್ತವೆ. ಹೀಗೆ ವೃತ, ಪೂಜೆ, ಅರ್ಚನೆ, ಆರಾಧನೆ ಶ್ರಾವಣದಲ್ಲಿ ನಿತ್ಯ ನಿರಂತರವಾಗಿರುತ್ತದೆ. ಆರ್ಭಟಿಸಿದ ಆಶ್ಲೇಷ ನಕ್ಷತ್ರದ ಮಳೆಗೆ ಭೋರ್ಗರೆವ ಶರಧಿ ಬರುವ ಮುಂದಿನ ಶ್ರಾವಣ ಹುಣ್ಣಿಮೆಯ ದಿನ ಶಾಂತವಾಗುತ್ತಾ ಇದೀಗ ವರಲಕ್ಷ್ಮೀ ಹಬ್ಬದ ಸಾತ್ವಿಕ ಪುಣ್ಯ ಕ್ಷಣಗಳನ್ನು ಕಂಡು ಸಂಭ್ರಮಿಸಲು ಎದುರಾಗಿದೆ.
 
🌸‘ _ಶ್ರಾವಣ_’🌸 ಎಂದರೆ ಒಳ್ಳೆಯ ಸಾತ್ವಿಕ ದಿನಗಳು ಪರಿಭಾವಿಸುವ ದಿನಗಳ ಮಾಸವೆಂದೇ ಬಿಂಬಿತ. ಚಂದ್ರನು ಪೂರ್ಣಿಮಾ ದಿನ ಶ್ರವಣ ನಕ್ಷತ್ರದಲ್ಲಿರುವ ಮಾಸವೇ ಶ್ರಾವಣ ಮಾಸ. ಚಂದ್ರನು ಪೂರ್ಣಿಮಾ ದಿನ ಶ್ರವಣ ನಕ್ಷತ್ರದಲ್ಲಿರುವ ಈ ಶ್ರಾವಣ ಮಾಸದಲ್ಲಿ ಪೌರ್ಣಮಿಗೆ ಪೂರ್ವಭಾವಿಯಾಗಿ ಬರುವ, ನಾಳಿನ ಶುಕ್ರವಾರದಂದು ನಾಡಿನಾದ್ಯಂತ ಸುಮಂಗಲೆಯರು ಶೃದ್ಧಾ ಭಕ್ತಿ ಭಾವದಿಂದ ಆಚರಿಸುವ ‘ಶ್ರೀ ವರ ಮಹಾಲಕ್ಷ್ಮಿ ವೃತ’ವು ಸಕಲ ಸೌಭಾಗ್ಯಗಳನ್ನು ಕರುಣಿಸುವ ದೇವಿ ಮಹಾಲಕ್ಷ್ಮಿಯ ವೃತವಾಗಿದೆ. ಯಾರು ಭಕ್ತಿಭಾವದಿಂದ ಈ ವ್ರತವನ್ನು ಆಚರಿಸುವರೋ ಅಂಥವರು ಅಖಂಡವಾದ ಐಶ್ವರ್ಯ ಪಡೆದು, ವರಲಕ್ಷ್ಮಿಯ ಪರಮಾನುಗ್ರಹದಿಂದ ಆಗರ್ಭ ಶ್ರೀಮಂತಿಕೆ ಭೋಗಭಾಗ್ಯಗಳನ್ನು ಅನುಭವಿಸುವರು.
 
_ಶ್ರೀ ಮಹಾಲಕ್ಷ್ಮೀ_. _ಅಚಿಂತ್ಯಮಹಿಮನಾದ ವಿಷ್ಣುವಿನ ವಕ್ಷಸ್ಥಳವಾಸಿನಿ. ವೈಭವೆಯೂ, ಐಶ್ವರ್ಯಪ್ರದಳೂ, ಚಂಚಲೆ ಗರ್ವಿಷ್ಟೆಯೂ ಸರ್ವದಾ ಸುಖ ಸಂಪನ್ಮೂಲ ನಿರತಳು. ವೈಕುಂಠದಲ್ಲಿ ಛತ್ರ, ಚಾಮರ, ವ್ಯಜನ ಪರ್ಯಂಕ ಹೀಗೆ ಎಲ್ಲವೂ ದೇವಿಯ ರೂಪಗಳೇ._  
 
ಈ ಬಾರಿಯ ಪಂಚಾಂಗದನ್ವಯ ‘ಸ್ವಸ್ತೀ ಶ್ರೀ ಶುಭಕೃತ ನಾಮ ಸಂವತ್ಸರದ ದಕ್ಷಿಣಾಯನ ಶುಕ್ಲ ಪಕ್ಷದ ಪೂರ್ಣಿಮೆಯ ಹಿಂದಿನ ದಿನವಾದ ನಾಳಿನ ದ್ವಿತೀಯ ಶ್ರಾವಣ ಶುಕ್ರವಾರದಂದು ವರ್ಷಂಪ್ರತಿ ನಡೆದುಕೊಂಡು ಬಂದಿರುವಂತೆ ಶ್ರೀ ವರ ಮಹಾಲಕ್ಷ್ಮಿ ವೃತವು ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಈ ಬಾರಿ ವಿಜೃಂಭಣೆಯಿಂದ ನಡೆಯಲಿದೆ.
 
_ಅದರಲ್ಲೂ ವಿಶೇಷವಾಗಿ ಭಕ್ತ ಪರಾಧೀನಳೂ, ದಯಾಸಾಗರಿಯೂ,ಲೋಕಪರಿಪಾಲಕಳೂ ಆದ ನಮ್ಮ ಸರ್ವಮಂಗಳೆಯನ್ನು ವಿಶೇಷವಾಗಿ ನಾಳಿನ ಪುಣ್ಯದಿನದ ಅಲಂಕಾರದಲ್ಲಿ *ಅಭಯ ವರದ- ಪದ್ಮಹಸ್ತಳಾಗಿ, ಕಮಲ ಪುಷ್ಪವನ್ನು ಪಿಡಿದು ಸ್ವರ್ಣ-ಧನ ಅಮೃತದಿಂದ ತುಂಬಿದ ಬಿಂದಿಗೆಯನ್ನು ಧರಿಸಿದ ರಾಜ್ಯಭೋಗ ಭಾಗ್ಯಗಳನ್ನು ಕರುಣಿಸುವ ಐಶ್ವರ್ಯಶಾಲಿನಿ ಶ್ರೀ ಮಹಾಲಕ್ಷ್ಮೀ ದೇವಿಯ* ಸ್ವರೂಪಳಾಗಿ ಕಾಣಬಹುದು._ 
 
ಸಂಪತ್ಸ್ವರೂಪಿಣಿಯಾದ ಶ್ರೀ ಮಹಾಲಕ್ಷ್ಮಿಯು ಸಮುದ್ರಮಂಥನ ಕಾಲದಲ್ಲಿ ಆವಿರ್ಭವಿಸಿ, ದೇವತೆಗಳಿಗೆ ವರವನ್ನು ಅನುಗ್ರಹಿಸಿ ಶ್ರೀ ಮನ್ನಾರಾಯಣನ ವರಿಸಿಕೊಂಡು ಪಾಣಿಗ್ರಹಣ ಮಾಡಿದಳು. ಆ ದಿನ ಶ್ರಾವಣ ಶುಕ್ರವಾರವಾಗಿತ್ತು.  
” *ಶುಕ್ಲೇ ಶ್ರಾವಣಿಕೇ ಮಾಸೆ ಪೂರ್ಣಿಮೋವಾಂತ್ಯ ಭಾಗವೇ ವರ ಲಕ್ಷ್ಮಾವೃತಂ ಕಾರ್ಯಂ ಸರ್ವ ಸಿದ್ಧಿ ಪ್ರದಾಯಕಮ್*” ಎಂಬ ಶ್ಲೋಕದ ತಾತ್ಪರ್ಯದಂತೆ ಪಾಲಾಬ್ಧಿ ಸಂಜಾತೆಯಾದ ಶ್ರೀ ಮಹಾಲಕ್ಷ್ಮಿ ದೇವಿಯನ್ನು ವೃತದ ಮೂಲಕ ಆರಾಧಿಸಿದಲ್ಲಿ ದಟ್ಟ ದಾರಿದ್ರ್ಯಗಳು ದೂರವಾಗಿ ಸಂಪತ್ಪ್ರದವಾದ -ಪುತ್ರ ಪೌತ್ರದಾಯಕವಾದ ಸನ್ಮಂಗಳವು ಆಕೆಯ ಪೂರ್ಣಾನುಗ್ರಹದಿಂದ ಲಭಿಸುವುದು. ಅಲ್ಲದೆ ಈ ವ್ರತವನ್ನು ಯಾರು ನಿಷ್ಠೆಯಿಂದ ಮಾಡುತ್ತಾರೋ ಅವರಿಗೆಲ್ಲರಿಗೂ ಒಳ್ಳೆಯದಾಗುತ್ತದೆಂದೂ  
ಎಲ್ಲಾ ಕೆಲಸ ಕಾರ್ಯಗಳಲ್ಲಿ ಏಳಿಗೆ ಆಗುತ್ತದೆ ಎಂಬ ನಂಬಿಕೆ. 
 
_ದೇವಳದ ಒಳ ಪ್ರಾಂಗಣದ ಎಡಭಾಗದ ಪ್ರಾಕಾರದಲ್ಲಿ ಭಕ್ತಾದಿಗಳ ಸಮ್ಮುಖದಲ್ಲಿ ವೃತವು ನಡೆಯಲಿದ್ದು ಸುವಾಸಿನಿ(ಸುಮಂಗಲೆ)ಯರು ಅತ್ಯುತ್ಸಾಹದಿಂದ ಸಂಕಲ್ಪ ಮನಸ್ಕರಾಗಿ ವೃತವನ್ನು ಕೈಗೊಂಡು ಆಚರಿಸಲಿರುವರು. ರಂಗವಲ್ಯಾದಿಗಳಿಂದ ಅಲಂಕೃತವಾದ ದೇವಳದ ಎಡ ಪ್ರಾಕಾರದ ಸ್ಥಳದಲ್ಲಿ ಕದಲೀದಿಂಡು ತಳಿರುತೋರಣ ಪುಷ್ಪಾಲಂಕಾರದಿಂದ ಶೃಂಗರಿತ ಮನೋಹರವಾದ ಮಂಟಪದ ಮಧ್ಯದಲ್ಲಿ ಮಹಾಲಕ್ಷ್ಮಿಯ ಚಿತ್ರಪಟವನ್ನಿಟ್ಟು, ಅಷ್ಟದಳ ಪದ್ಮವನ್ನು ರಚಿಸಿ, ಅದರ ಮೇಲೆ ಕಲಶವನ್ನು ಸ್ಥಾಪಿಸಿ, ರಜತ ಮುಖವಾಡವನ್ನಿಟ್ಟು ದೇವಿಯ ಸಾನಿಧ್ಯವನ್ನು ಆಹ್ವಾನಿಸಲಾಗುತ್ತದೆ. ಈ ರೀತಿ ಮಾಡುವುದರಿಂದ ಕಲಶವು ಲಕ್ಷ್ಮಿ ದೇವಿಯನ್ನು ಸಾಂಕೇತಿವಾಗಿ ಪ್ರತಿನಿಧಿಸುತ್ತದೆ. ನಂತರ ಗೆಜ್ಜೆ ವಸ್ತ್ರ , ಗಂಧ, ಅಕ್ಷತೆ, ಅರಿಶಿನ ಕುಂಕುಮ, ಸಿಂಧೂರ, ಏರಿಸಿ ನಾನಾ ತರಹದ ಪತ್ರ ಪುಷ್ಪಾದಿಗಳಿಂದ ಅಲಂಕರಿಸಿ ನಂತರ ಲಕ್ಷ್ಮಿ ಅಷ್ಟೋತ್ತರ, ಮಂತ್ರಾದಿಯನ್ನು ಪಠಿಸುತ್ತಾ… ಹೀಗೆ ಹೂವು ಹರಿದ್ರಾ-ಕುಂಕುಮಾದಿ ಆಭರಣಗಳಿಂದ ಅಲಂಕೃತಳಾದ ಹರಿವಲ್ಲಭೆಗೆ ವೇದೋಕ್ತ ಸೂಕ್ತ ಮಂತ್ರಗಳಿಂದ ಅರ್ಚಿಸಿ ಹಾಡು-ಹಸೆಗಳಿಂದ ಭಜಿಸಿ, ಭಕ್ತಿಭಾವದಿಂದ ಲಕ್ಷ್ಮೀ ದೇವಿಯ ಆರಾಧನೆ ಸುವಾಸಿನಿಯರಿಂದ ನಡೆಯಲ್ಪಡುತ್ತದೆ._ 
 
_ಶ್ರೀ ವರಮಹಾಲಕ್ಷ್ಮಿ ವ್ರತ ಕಥಾ ಶ್ರವಣ ಮಾಡಿದವರಿಗೆ ದಾರಿದ್ರ್ಯ ಕಳೆದು ಆರ್ಯುರಾರೋಗ್ಯ, ಪುತ್ರಪೌತ್ರ ಪರಿವೃತರಾಗಿ ಸಂಪತ್ತು, ಧನ, ಧಾನ್ಯಗಳೆಲ್ಲವೂ ಪ್ರಾಪ್ತಿಯಾಗುವುದೆಂಬ ವಿಶ್ವಾಸದಿಂದ ದೇವಳದಲ್ಲಿ ಸುಖ ಸಮೃದ್ಧಿಯನ್ನು ಕರುಣಿಸುವ ಸೌಭಾಗ್ಯದಾತೆಯ ಆರಾಧನೆ ನಡೆಯುತ್ತದೆ._
 
ಯಾರು ನಾಳಿನ ವರಮಹಾಲಕ್ಷ್ಮಿ ವೃತದ ಕಥಾ ಶ್ರವಣವನ್ನು ಶ್ರದ್ಧೆಯಿಂದ ಕೇಳುವರೋ, ಹೇಳುವರೋ ಅಂಥವರು ಸಕಲ ದಾರಿದ್ರ್ಯದಿಂದ ವಿಮುಕ್ತರಾಗಿ ಸಕಲೈಶ್ವರ್ಯವನ್ನು ಅನುಭವಿಸಿ ಅಂತ್ಯದಲ್ಲಿ ಮಹಾದೇವಿಯ ಸಾಯುಜ್ಯವನ್ನು ಹೊಂದುವರು ಎಂದು ಭವಿಷ್ಯೋತ್ತರ ಪುರಾಣೋಕ್ತ 
ದಲ್ಲಿ ತಿಳಿಸಿದೆ, ಅಂತೆಯೇ _”ಸರ್ವ ಪಾಪ ಹರೇ ದೇವಿ..ಮಹಾ ಪಾಪ ಹರೇ ದೇವಿ..ಸರ್ವ ದುಃಖ ಹರೇ ದೇವಿ”_ ಎಂದು ಸಾಕ್ಷಾತ್ ಲಕ್ಷ್ಮಿಯಾಗಿ ಮೆರೆಯಲ್ಪಡುವ ಒಡತಿ ಮಂಗಳೆಯಲ್ಲಿ ಪ್ರೀತಿಯಿಂದ ಇಷ್ಟಾರ್ಥಗಳನ್ನು ಪ್ರಾರ್ಥಿಸಿ ದೋಷವರ್ಜಿಸಿ ಕಾಮಿತಾರ್ಥಗಳನ್ನು ನೆರವೇರಿಸಿಕೊಳ್ಳೋಣ.
 
_ಬನ್ನಿ. ನಾಳಿನ ಶ್ರಾವಣ ಶುಕ್ರವಾರ ಸಾಕ್ಷಾತ್ ಶ್ರೀ ವರಮಹಾಲಕ್ಷ್ಮಿ ಸ್ವರೂಪಳಾಗಿ ಮೆರೆಯಲ್ಪಡಲಿರುವ ಶ್ರೀ ಮಂಗಳಾದೇವಿಯ ಚರಣ ಕಮಲಗಳಲ್ಲಿ ಶಿರಬಾಗಿ ನಮಿಸಿ ಕೃತಾರ್ಥರಾಗೋಣ._

Varamahalakshmi Pooja 2021