Sri Mangaladevi Annual Jathra Festival 2023 – Day 7

Blissful Darshan

ಶ್ರೀ ಮಂಗಳಾದೇವಿ ಅಮ್ಮನಿಗೆ ರಕ್ತೇಶ್ವರಿ ಅಲಂಕಾರ🗡️

ಧ್ವಜಾರೋಹಣದೊಂದಿಗೆ ಉತ್ಸವ ಆರಂಭವಾದರೆ ಧ್ವಜಾವರೋಹಣದೊಂದಿಗೆ ಉತ್ಸವಕ್ಕೆ ಮಂಗಳ. ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಧ್ವಜ ಆರೋಹಣದಿಂದ ಧ್ವಜ ಅವರೋಹಣದ ವರೆಗೆ ಆರೂ ದಿವಸಗಳ ಪರ್ಯಂತ ವೈಭವಪೂರ್ಣ ಅಲಂಕಾರಾದಿ ಬಲಿ ಉತ್ಸವಗಳ ಮೂಲಕ ಬಹು ವಿಶೇಷತೆ ಹಾಗು ಜನಾಕರ್ಷಣೆಗೆ ಕಾರಣವಾಗಿರುವ ನಮ್ಮ ಮಂಗಳಾದೇವಿ ಜಾತ್ರೆಯು ನಿರ್ವಿಘ್ನವಾಗಿ ನೆರವೇರಿ ಯಶಸ್ವೀಯುತವಾಗಿ ಇಂದು ಸಂಪ್ರೋಕ್ಷಣೆಯೊಂದಿಗೆ ಸುಸಂಪನ್ನವಾಗಲಿದೆ.

ವರ್ಷಾವಧಿ ಜಾತ್ರ ಮಹೋತ್ಸವದ ಪ್ರಯುಕ್ತ ಇಂದಿನ ಶನಿವಾರದಂದು ನಡೆಯಲಿರುವ ನೇಮೋತ್ಸವದ ಶುಭ ಸಂದರ್ಭದಲ್ಲಿ ರಕ್ತೇಶ್ವರಿಯ ಅಲಂಕಾರದಲ್ಲಿ ರೌದ್ರ ಸ್ವರೂಪಳಾಗಿ ಪ್ರಕಟಳಾದ ದೇವಿಯು ನೀಳ ಕೇಶಾಲಂಕಾರದಲ್ಲಿ ಹಳದಿ ಸ್ವರ್ಣ, ಕೆಂಪು ವರ್ಣ ಪ್ರಧಾನವಾದ ವಿವಿಧ ವರ್ಣವುಳ್ಳ ಸೀರೆಗಳನ್ನು ತೊಟ್ಟು ಇಳಿಬಿಟ್ಟ ನೆರಿಗೆಯನ್ನಾಗಿ ಧರಿಸಿ ತೇಜೋಮಯಳಾಗಿ ಖಡ್ಗವನ್ನು ಧರಿಸಿ ಅಭಯ ವರದ ಹಸ್ತಳಾಗಿ, ಖಡ್ಗ ಚಾಮರವನ್ನು ಹಿಡಿದು, ತ್ರಿಶೂಲವನ್ನು ಧಾರಣೆ ಮಾಡಿಕೊಂಡು ಅಬ್ಬರಿಸುತ್ತಾ ನೀಳ ಶಿಖೆಯ ಕೇಶಾಲಂಕಾರದಲ್ಲಿ ತಲೆಮಣಿಯನ್ನು ಇಟ್ಟು ಸಾಕ್ಷಾತ್ ಖಡ್ಗ ಪಾಣಿಯಾದ ರಕ್ತೇಶ್ವರಿಯಾಗಿ ಅಲಂಕೃತಳಾದ ಶ್ರೀ ಮಂಗಳಾದೇವಿಯು ವಿಜೃಂಭಿಸುತ್ತಿರುವಳು 🔥

ಇಂದು ಸಾಯಂಕಾಲ ೬’ಗಂಟೆಗೆ ಸರಿಯಾಗಿ ರಕ್ತೇಶ್ವರಿ ಸಹಿತ ಪರಿವಾರ ದೈವಗಳ ಭಂಡಾರ ಏರುವುದರೊಂದಿಗೆ ರಾತ್ರಿ ೮.೩೦’ಕ್ಕೆ ಶ್ರೀ ದೇವಿಯ ಮಹಾಪೂಜೆಯ ಬಳಿಕ ಶ್ರೀ ಮಂಗಳಾದೇವಿ ಕ್ಷೇತ್ರದ ಪರಿವಾರ ದೖೆವಗಳಾದ ರಕ್ತೇಶ್ವರಿ, ನಂದಿಕೋಣ ಹಾಗು ಗುಳಿಗೇಶ್ವರ ದೖೆವಗಳಿಗೆ ನೃತ್ಯ ಸೇವೆಯೊಂದಿಗೆ ನೇಮೋತ್ಸವವು ನಡೆಯಲಿದೆ.

ಶ್ರೀ ಕ್ಷೇತ್ರದ ಪರಿವಾರ ದೈವಗಳು ಮಂಗಳೆಯ ಆಜ್ಞಾನುಸಾರ ದೇವಾಲಯದ ರಕ್ಷಣೆಯೊಂದಿಗೆ ಕ್ಷೇತ್ರಪಾಲ ದೈವಗಳಾಗಿ ನೆಲೆನಿಂತಿವೆ. ಅದರಲ್ಲೂ ಶಕ್ತಿ ರಕ್ತೇಶ್ವರಿಯೆಂದರೆ ಎಲ್ಲರಿಗೂ ಅತಿಯಾದ ಭಯ ಭಕ್ತಿ. ಅಷ್ಟೇ ಪ್ರೀತಿ. ದೇವಳದ ಮೇಲುಸ್ತುವಾರಿ ದೈವವಾಗಿ ಈಕೆ ಮೆರೆಯಲ್ಪಡುತ್ತಾಳೆ. ಮಂಗಳೆಯ ಆಜ್ಞಾನುವರ್ತಿಯಾಗಿ ಅವಳ ಅಣತಿಯಂತೆ ಕ್ಷೇತ್ರದಲ್ಲಿ ಕಿಂಚಿತ್ತೂ ದೋಷ ಲೋಪವಾಗದಂತೆ, ಅಧರ್ಮವನ್ನು ಧ್ವಂಸಿಸಿ ಧರ್ಮದೊಂದಿಗೆ ಸಕಲ ಇಚ್ಛಿತ ಕಾರ್ಯಗಳನ್ನು ನಡೆಸಿಕೊಡುತ್ತಾಳೆ. ನೇಮೋತ್ಸವದ ನರ್ತನ ಸೇವೆಯೊಂದಿಗೆ ತನ್ನ ಪರಿವಾರ ದೈವಗಳನ್ನು ಸಂತೃಪ್ತಿಪಡಿಸುವುದರಿಂದ ಶ್ರೀ ದೇವಿಯು ಸಂತಸದಿಂದ ಪ್ರಸನ್ನಳಾಗುತ್ತಾಳೆ ಎಂಬುದು ಅನಾದಿಯಿಂದ ಬಂದ ನಂಬಿಕೆ.

ರಕ್ತೇಶ್ವರಿಗೆ ಭಕ್ತಾದಿಗಳಿಂದ ಎಲ್ಲಿಲ್ಲದ ಗೌರವ. ದೇವಳದ ವಾಮಭಾಗದ ಕಟ್ಟೆಯಲ್ಲಿ ಈಕೆಯ ಆವಸ ಸ್ಥಾನ. ಮಾಯಾರೂಪದಲ್ಲಿ ಶ್ರೀ ದೇವಿಯ ಆಜ್ಞಾ ಪರಿಪಾಲಕಳಾಗಿ ಸತ್ಯ ಧರ್ಮ ನ್ಯಾಯ ನಿಷ್ಠೆ ನೀತಿ ಕಾನೂನು ಕರ್ಮಾನುಸಾರ ಧರ್ಮಬದ್ಧವಾಗಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗು ರಕ್ಷಣಾ ಕೃರ್ತಳಾಗಿ ಪೂರ್ವದಿಂದಲೂ ದೇವಳದ ಧರ್ಮ ದೇವತೆಯಂತೆ ನೆಲೆನಿಂತ ಶಕ್ತಿ ಸ್ವರೂಪಿಣಿ.

ನೇಮೋತ್ಸವದ ಅಮೃತ ಕಲ್ಪದಲ್ಲಿ ಆವೇಶದೊಂದಿಗೆ ಆಶ್ವಾಸನೆಯ ನೀಡುತ್ತಾ ಸಾಂಪ್ರದಾಯಿಕ ನುಡಿಗಟ್ಟಿನ ಮೂಲಕ ಅಭಯ ಪ್ರಧಾನ ಮಾಡಿ ನೆರೆದ ಭಕ್ತಾದಿಗಳನ್ನು ಹರಸಿ ಆಶಿರ್ವದಿಸುವ ದೈವಗಳ ನೇಮೋತ್ಸವ ಒಂದು ಆಚರಣೆಯಾಗಿದ್ದು ಇಂದು ದೇವಳದ ಸಮೀಪದ ಪರಿವಾರ ದೈವಗಳ ವಾಸ್ತವ್ಯ ನೆಲೆಯಾದ ಕಟ್ಟೆಯಲ್ಲಿ ಸಹಸ್ರ ಭಕ್ತರು ನೇಮವನ್ನು ನೋಡಿ ಪುಳಕಿತಲಾಗಲಿರುವರು.

ಪ್ರಾಚೀನ ಕಾಲದ ಕರಾವಳಿಯ ಸಾಮಾಜಿಕ ವ್ಯವಸ್ಥೆಯೊಂದಿಗೆ ಧಾರ್ಮಿಕವಾಗಿ ಬೆಸೆದುಕೊಂಡು ಚಾರಿತ್ರಿಕ ಸಾಂಸ್ಕೃತಿಕ ನ್ಯಾಯಾಂಗ ವ್ಯವಸ್ಥೆಯ ರೂಢಿಗತ ಪರಂಪರೆಯಾದ ದೈವಾರಾಧನೆಯನ್ನು ಅನನ್ಯವಾಗಿ ಬಿಂಬಿಸುವ ಧಾರ್ಮಿಕ ಆಚರಣೆಯೇ ನೇಮೋತ್ಸವ✨
ಉತ್ಸಾಹ ಶೌರ್ಯ ಸಾಹಸಮಯ ವ್ಯಕ್ತಿತ್ವವನ್ನು ಪ್ರತಿಪಾದಿಸುವ ‘ಹಳದಿ ಅರ್ಧಲ ವರ್ಣ’ವನ್ನು ಮುಖಕ್ಕೆ ತಳಹದಿಯ ಬಣ್ಣವಾಗಿ ಲೇಪಿಸಿ ವಿಜಯದ ಸಂಕೇತವಾಗಿ ಖಡ್ಗ, ಘಂಟೆ, ಚಾಮರ ವೈವಿಧ್ಯಮಯ ಆಯುಧಗಳನ್ನು ಹಿಡಿದು ನೆರಿಗೆ ಸೀರೆಯ ವೈಭವೋಪೂರ್ಣ ವೇಷ ಭೂಷಣಗಳಿಂದ ಅಲಂಕರಿಸಿ ಗಗ್ಗರವನ್ನು ತೊಟ್ಟು, ನೃತ್ಯಿಸಿ ತುಳುವಿನ ಪ್ರೌಢ ಭಾಷಾ ಶೈಲಿಯಲ್ಲಿ ತಾರ್ಕಿಕವಾಗಿ ವಿಚಾರ ಮಂಡಿಸುವುದು ಇಲ್ಲಿನ ದೈವಗಳ ವೈಶಿಷ್ಠ್ಯ.

ದೀವಟಿಕೆಗಳ ಬೆಳಕಿನಲ್ಲಿ, ನಾಗಸ್ವರ ತಾಸೆ ತೆಂಬರೆ, ಬ್ಯಾಂಡ್ ವಾದನಗಳ ಸುಶ್ರಾವ್ಯ ಮಾಧುರ್ಯದಲ್ಲಿ ಗಗ್ಗರವನ್ನು ತೊಟ್ಟು ನರ್ತನ ಸೇವೆಯನ್ನು ಸಂತೋಷದಿಂದ ಸ್ವೀಕರಿಸಿ ನೆರೆದ ಸಮಸ್ತ ಭಕ್ತಾದಿಗಳನ್ನು ಹರಸಿ ಆಶೀರ್ವದಿಸುವ ನೇಮೋತ್ಸವದ ಆ ವೈಭವೋಪೇತ ಕ್ಷಣಗಳನ್ನು ಕಂಡು ಶ್ರೀ ದೈವಗಳ ಶ್ರೀ ಮುಡಿ ಗಂಧಪ್ರಸಾದವನ್ನು ಸ್ವೀಕರಿಸಿ ಕೃತಾರ್ಥರಾಗೋಣ.

°°°°°°°°°°°°°°°°°°°°°°°°°°°°°°°°°°°°°°°°°°°°°°°°°°
ಕಳೆದ ಶುಕ್ರವಾರ ರಾತ್ರಿ ೮.೩೦’ಕ್ಕೆ ಸರಿಯಾಗಿ ಶ್ರೀ ದೇವಿಗೆ ವಸಂತ ಮಂಟಪದಲ್ಲಿ ಅಷ್ಟಾವಧಾನ ಸೇವೆಯೊಂದಿಗೆ ಓಕುಳಿ ಪೂಜೆಯು ನೆರವೇರಿತು. ಬಳಿಕ ೯’ಕ್ಕೆ ಸಣ್ಣಭಂಡಿಯಲ್ಲಿ ಶ್ರೀ ದೇವಿಯ ಅವಭೃತ ಸವಾರಿ ಹೊರಟು ನೇತ್ರಾವತಿ ಫಲ್ಗುಣಿ ಸಂಗಮ ತೀರದಲ್ಲಿ ದೇವಿಯ ಅವಭೃತ ಮಂಗಳ ಸ್ನಾನವನ್ನು ಕಂಡು ಭಾವುಕ ಭಕ್ತಾದಿಗಳು ತನ್ಮಯರಾದರು. ಬಳಿಕ ಮುಂಜಾನೆ ೧’ಕ್ಕೆ ಸ್ವಸ್ಥಾನ ಕ್ಷೇತ್ರಕ್ಕೆ ಭಂಡಿಯಲ್ಲಿ ದೇವಿಯ ಆಗಮನವಾಗಿ ಜಾತ್ರೆಯ ಅಂತಿಮ ಉತ್ಸವವಾಗಿ ದರ್ಶನಬಲಿಯ ನಡೆದು ಧ್ವಜಾವರೋಹಣವು ನಡೆಯಿತು.

ಇಂದು ಪ್ರಾತಃಕಾಲ ಶುದ್ಧೀ ಕಲಶವಾಗಿ ಮಧ್ಯಾಹ್ನದ ಮಹಾಪೂಜೆಯು ನೆರವೇರಿ ಬ್ರಾಹ್ಮಣೋತ್ತಮರಿಂದ ಗಂಧಾಕ್ಷತೆಯ ಅಕ್ಷತೆಯ ಪ್ರಸಾದವನ್ನು ಸ್ವೀಕರಿಸಿ ಸಂಪ್ರೋಕ್ಷಣೆಯೊಂದಿಗೆ ಶ್ರೀ ಮಂಗಳಾದೇವಿ ಅಮ್ಮನವರ ವಾರ್ಷಿಕ ಜಾತ್ರ ಮಹೋತ್ಸವ ೨೦೨೨ ಸುಸಂಪನ್ನವಾಗಲಿದೆ.👏

ಇಂದಿನ ಅಲಂಕಾರದಲ್ಲಿ ಸಾಕ್ಷಾತ್ ರಕ್ತೇಶ್ವರಿಯಾಗಿ ಖಡ್ಗವನ್ನು ಹಿಡಿದು ಆವಿರ್ಭವಿತಳಾದ ರೌದ್ರ ಸ್ವರೂಪಿಣಿಯು ವಸುಂಧರೆಗೆ ದೀರ್ಘ ಆರೋಗ್ಯದ ಆಯುಷ್ಯದ ಅಮೃತದ ಸುಧೆಯನ್ನು ಹರಿಸಲಿ. ಅವಳ ಪ್ರಜೆಗಳಾದ ನಾವು ತಿಳಿದೊ ತಿಳಿಯದೋ ಮಾಡಿದ ಸರ್ವ ಅಪರಾಧಗಳನ್ನು ಮನ್ನಿಸಿ ಬರುವ ಸಕಲ ಗ್ರಾಮಾರಿಷ್ಟ, ರಾಜ್ಯಾರಿಷ್ಟ, ದೇಶಾರಿಷ್ಟಗಳನ್ನು ನಿವೃತ್ತಿಗೊಳಿಸಿ ದೇವಳದ ಕೀರ್ತಿ ಉದಾತ್ತತೆ ಸ್ಫುರಿಸಿ, ಸಂಪೂರ್ಣ ವಿಶ್ವಕ್ಕೆ ಸುಖಶಾಂತಿ ಶ್ರೇಯೋಭಿವೃದ್ಧಿ ಲಭಿಸಿ ಶಾಂತಿಯಿಂದ ಧರ್ಮಮಾರ್ಗದಲ್ಲಿ ನಡೆಯುವಂತೆ ಅನುಗ್ರಹಿಸಲಿ.

ಶ್ರೀ ಕ್ಷೇತ್ರದ ಪರಿವಾರ ದೈವಗಳಾದ ರಕ್ತೇಶ್ವರಿ, ನಂದಿಕೋಣ ಹಾಗು ಗುಳಿಗೇಶ್ವರ.

The Gaurdian deities of Sri Mangaladevi Temple namely Raktheswari, Nandi Kona and Guligeshwara have their Nrithya Seva being offered to them today